ಒಳದೂಡಿಕೆ: ಮೊದಲೇ ಕೊರೆದ ರಂಧ್ರವನ್ನು ಮತ್ತಷ್ಟು ವಿಸ್ತರಿಸುವ ಕ್ರಿಯೆ (ರೀಮಿಂಗ್). ಕೊರೆವ ಆಯುಧವಾದ ಬೈರಿಗೆಯ ಅಲಗು ಸವೆದು ಹೋಗಿದ್ದರೆ ಅಥವಾ ಬೇರೆ ಯಾಂತ್ರಿಕ ದೋಷಗಳಿದ್ದರೆ ಆಗ ಕೊರೆದ ತೂತು ಅಳತೆಯ ಅನುಸಾರ ಇರುವುದಿಲ್ಲ. ಇಂಥ ರಂಧ್ರದೊಳಗೆ ಬೆಣೆಯನ್ನು ತೂರಲಾಗುವುದಿಲ್ಲ. 

ಈ ಸನ್ನಿವೇಶದಲ್ಲಿ ರಂಧ್ರವನ್ನು ಉಚಿತ ಪ್ರಮಾಣದಲ್ಲಿ ಹಿಗ್ಗಿಸಿ ತೂರುಬೆಣೆಗೆ ಸರಿಯಾದ ಅವಕಾಶ ಒದಗಿಸುವುದೇ ಒಳದೂಡುವ ಆಯುಧದ ಕೆಲಸ. ಇದೊಂದು ಸಂವಾಟವಿರುವ (ಟೇಪರಿಂಗ್) ಆಯುಧ. ಸಾಮಾನ್ಯವಾಗಿ ಒಳದೂಡುವ ಆಯುಧವನ್ನು ಹೊಸ ತೂತುಗಳನ್ನು ಕೊರೆಯಲು ಬಳಸುವುದಿಲ್ಲ.

ಒಳದೂಡುವ ಕ್ರಿಯೆಯ ವೇಗ ಸಾಮಾನ್ಯವಾಗಿ ಬೈರಿಗೆಯ ವೇಗದ 2/3 ರಷ್ಟು, ಈ ಕ್ರಿಯೆಯನ್ನು ಎಸಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು ಹೀಗಿವೆ: 1 ರಂಧ್ರವಿರುವ ವಸ್ತುವನ್ನು ಅಲುಗಾಡದಂತೆ ಬಿಗಿಹಿಡಿದಿರಬೇಕು. 2 ಮಾರ್ಗದರ್ಶಿಯ (ಗೈಡ್) ಅವಶ್ಯಕತೆಯಿದೆಯೇ ಎಂದು ಪರಿಶೀಲಿಸಬೇಕು. 3 ಕೈ ಆಯುಧಗಳನ್ನು ಉಪಯೋಗಿಸುವಾಗ ಸಮಾನ (ಯೂನಿಫಾರಂ) ಬಲ ಆಘೂರ್ಣ (ಟಾರ್ಕ್) ಹಾಗೂ ಆಕ್ಷಿಕ ಒತ್ತಡ (ಆಕ್ಷಿಯಲ್ ಪ್ರೆಶರ್) ಇರಬೇಕು. 4 ಒಳದೂಡುವ ಆಯುಧದಲ್ಲಿ ಕಂಪನ (ಚಾಟರಿಂಗ್) ಇಲ್ಲದಿರುವಂತೆ ಏರ್ಪಾಡಿರಬೇಕು. ಆವಶ್ಯಕವಾಗಿರುವ ಸ್ನೇಹಕಗಳನ್ನು (ಲ್ಯೂಬ್ರಿಕೆಂಟ್ಸ್‌) ಉಪಯೋಗಿಸಬೇಕು.

ಒಳದೂಡಬೇಕಾದ ಬೆಣೆಗಳು ಮತ್ತು ರಂಧ್ರಗಳ ಸ್ವಭಾವವನ್ನು ಅನುಸರಿಸಿ ಸಂದರ್ಭಾನುಸಾರ ನೇರನಾಳಾಯುಧ (ಸ್ಟ್ರೇಟ್ ಫ್ಲೂಟ್ ರೀಮರ್), ಕುಂಡಲೀನಾಳಾಯುಧ (ಹೆಲಿಕಲ್ ಫ್ಲೂಟ್ ರೀಮರ್), ಸಂವಾಟಾಯುಧ (ಟೇಪರ್ ರೀಮರ್), ವಿಸ್ತರಣಸಾಧ್ಯ ಆಯುಧ ಮುಂತಾದುವನ್ನು ಉಪಯೋಗಿಸಬಹುದು. ಈ ಆಯುಧಗಳನ್ನು ಯಂತ್ರಗಳೊಂದಿಗೆ ಅಥವಾ ಕೈಯಿಂದ ಉಪಯೋಗಿಸುವರು. ಉತ್ತಮ ಫಲ ಪಡೆಯಲು ಆಯುಧಗಳ ಕರ್ತನಧಾರಗಳು (ಕಟ್ಟಿಂಗ್ ಎಡ್ಜಸ್) ಬಹಳ ಹರಿತವಾಗಿರಬೇಕು. ಇವನ್ನು ಬಹಳ ಗಡುಸಾದ (ಹಾರ್ಡ್) ಉಕ್ಕಿನಿಂದ ತಯಾರಿಸುತ್ತಾರೆ. ಆಯುಧ ರಂಧ್ರದೊಳಗೆ ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಹೆಚ್ಚಿನ ಆಯುಧಗಳ ತುದಿಗಳನ್ನು ಸಂವಾಟಗೊಳಿಸಿರುತ್ತಾರೆ. ಆಯುಧದ ಕರ್ತನಧಾರಗಳೂ ಸ್ವಲ್ಪ ಬಾಗಿರುವುದರಿಂದ ಚಲನೆ ಸಲೀಸಾಗುವುದು. ಕತ್ತರಿಸುವ ಅಲಗುಗಳ ನಡುವೆ ಇರುವ ನಾಳಗಳ ಮೂಲಕ ಕತ್ತರಿಸಲ್ಪಟ್ಟ ಲೋಹದ ಚೂರುಗಳು ಸರಿದುಹೋಗುತ್ತವೆ.

ಒಳದೂಡುವ ಆಯುಧಗಳು ಸತತ ಕಾರ್ಯದಿಂದ ಸವೆದಿದ್ದರೆ ಕರಾರುವಾಕ್ಕಾದ ಕೆಲಸಗಳಿಗೆ ಅವನ್ನು ಬಳಸಬಾರದು. ಸಾಣೆ ಹಿಡಿದು ಕಡಿಮೆ ಅಳತೆಯ ಆಯುಧಗಳಾಗಿ ಮಾರ್ಪಡಿಸಿ ಆ ಅಳತೆಗೆ ತಕ್ಕ ಕೆಲಸಗಳಿಗೆ ಬೇಕಾದರೆ ಅವನ್ನು ಉಪಯೋಗಿಸಬಹುದು.
(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ